ಶಬಾನಾ ಆಜ್ಮಿ
	1950-. ಭಾರತದ ಪ್ರಮುಖ ಚಲನಚಿತ್ರ ನಟಿ, ಸಾಮಾಜಿಕ ಕಾರ್ಯಕರ್ತೆ, ರಾಜ್ಯಸಭೆಯ ಮಾಜಿ ಸದಸ್ಯೆ. ಐದು ಬಾರಿ ರಾಷ್ಟ್ರೀಯ ಪ್ರಶಸ್ತಿಗಳಿಸಿದ ಪ್ರತಿಭಾವಂತೆ. ಇವರು 1950ರಲ್ಲಿ ಜನಿಸಿದರು. ಇವರ ತಂದೆ ಕೈಫೀ ಆಜ್ಮಿ ಪ್ರಸಿದ್ಧ ಸಮಾಜವಾದೀ ಕವಿ, ಸಾಹಿತಿ. ಶಬಾನಾರ ಆಸಕ್ತಿ ಹಲವು ಬಗೆಯದು. ನಟನೆಯಷ್ಟೇ ಅಧ್ಯಯನದಲ್ಲೂ ತೊಡಗಿಸಿಕೊಂಡಿರುವ ಇವರು ಎಫ್.ಟಿ.ಐ.ಐ.ನ ಬಂಗಾರ ಪದಕ ವಿಜೇತರು. ಅಂಕುರ್ (1974) ಇವರ ಪ್ರಥಮ ಚಿತ್ರ. ಅಸಾಂಪ್ರದಾಯಿಕ ಪಾತ್ರಗಳಲ್ಲಿ, ಕಲಾತ್ಮಕ ಚಿತ್ರಗಳಲ್ಲಿ ಇವರು ಗಮನಸೆಳೆದಿದ್ದಾರೆ. ಶಕ್ (1976) ಚಿತ್ರದಲ್ಲಿ ಅನುಮಾನದಿಂದ ನರಳುವ ಗೃಹಿಣಿಯ ಪಾತ್ರದಲ್ಲಿ, ಮನೋವಿಶ್ಲೇ ಷಣಾತ್ಮಕ ಆಯಾಮಕ್ಕೆ ಅಮೋಘ ಅಭಿನಯರೂಪ ನೀಡಿದ್ದಾರೆ. ಸತ್ಯಜಿತ್ ರೇಯವರ ಶತ್ರಂಜ್ ಕೇ ಖಿಲಾಡಿ, ಶಾಮ್ ಬೆನಗಲ್‍ರ ನಿಶಾಂತ್ ಇವರಿಗೆ ಹೆಸರು ತಂದ ಚಿತ್ರಗಳು. 

	ಜನಪ್ರಿಯ ಚಿತ್ರಗಳಾದ ಅಮರ್ ಅಕ್ಬರ್ ಆಂತೋಣಿ (1977), ಪರ್ವರಿಶ್ (1977) ಮೊದಲಾದುವು ಇವರ ವರ್ಚಸ್ಸು ಹೆಚ್ಚಿಸಿದುವು. ಅರ್ಥ್, ಮಾಸೂಮ್ ಚಿತ್ರಗಳಲ್ಲಿನ ಇವರ ಅಭಿನಯ ಚಿತ್ರರಸಿಕರ ಅಪಾರ ಮೆಚ್ಚುಗೆ ಪಡೆಯಿತು. ಚಿತ್ರ ಲೇಖಕರಾದ ಜವೇದ್ ಅಖ್ತರ್‍ರನ್ನು ವಿವಾಹವಾದ ಇವರು ಅವರ ಸಹಯೋಗದಲ್ಲಿ ಯಶಸ್ಸಿನ ಉತ್ತುಂಗ ತಲಪಿದರು. ಮೇಡಮ್ ಸಾಸಸ್ಕಾ, ಇಮಾಕುಲೇಟ್ ಕನ್‍ಸೆಪ್ಶನ್ ಮೊದಲಾದ ಅಂತರರಾಷ್ಟ್ರೀಯ ಚಿತ್ರಗಳಲ್ಲೂ ಅಭಿನಯಿಸಿದರು. ಇವರ ಪ್ರತಿಭೆಗೆ ಅಸಂಖ್ಯ ಸನ್ಮಾನಗಳು ಸಂದಿವೆ. ಇಸ್ಮಾಯಿಲ್ ಮರ್ಚೆಂಟ್ ಅವರ ಕಸ್ಟಡಿ ಇವರು ಅಭಿನಯಿಸಿದ ಅಂಕುರ್ (1974), ಅರ್ಥ್ (1982), ಖಂಡರ್ (1983), ಪಾರ್ (1984) ಮತ್ತು ಗಾಡ್ ಮದರ್ (1999) ಚಿತ್ರಗಳಿಗೆ ರಾಷ್ಟ್ರೀಯ ಪುರಸ್ಕಾರ ಲಭ್ಯವಾಗಿದೆ. ಸ್ವಾಮಿ (1977), ಅರ್ಥ್ (1982) ಹಾಗೂ ಭಾವನಾ (1984) ಚಿತ್ರಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ. ಫೈರ್ ಚಿತ್ರಕ್ಕಾಗಿ ಶಿಕಾಗೊ ಚಲನ ಚಿತ್ರೋತ್ಸವದಲ್ಲಿ (1996) ಹಾಗೂ ಲಾಸ್ ಏಂಜಲೀಸ್‍ನ ಔಟ್‍ಫೆಸ್ಟ್‍ನಲ್ಲಿ (1997) ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. 1998ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ.

	ಸಾಮಾಜಿಕ ಕಾರ್ಯಕರ್ತರಾದ ಇವರು ಮುಂಬೈ ಕೊಳಚೆ ನಿವಾಸಿಗಳ ಪರವಾಗಿ, ಕಾರ್ಮಿಕರ ಪರವಾಗಿ ಆಂದೋಲನ ನಡೆಸಿದ್ದಾರೆ. ಕೋಮು ವಿರೋಧಿ ಚಳವಳಿಗಳಲ್ಲಿ, ಪರಿಸರ ಕಾಳಜಿಗಳಲ್ಲಿ ಮುಂಚೂಣಿ ನಾಯಕಿಯಾದ ಇವರು ರಾಜ್ಯಸಭಾ ಸದಸ್ಯರಾಗಿಯೂ ದುಡಿದಿದ್ದಾರೆ.							
		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ